ಯಾರಿವಳು ಈ ಹುಡುಗಿ -ಪುಟ್ಟಗೌರಿಯ ದೊಡ್ಡ ಹೆಜ್ಜೆ

"ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ರಂಜನಿ ರಾಘವನ್‌ ಈಗ ಹಿರಿತೆರೆಯಲ್ಲೂ ಬಿಝಿಯಾಗುತ್ತಿದ್ದಾರೆ. ಧಾರಾವಾಹಿ ಜೊತೆ ಜೊತೆಗೆ ಎರಡು ಸಿನಿಮಾಗಳಲ್ಲಿ ರಂಜನಿ ನಾಯಕಿಯಾಗಿ ನಟಿಸುತ್ತಿದ್ದಾರೆ. "ರಾಜ ಹಂಸ' ಹಾಗೂ "ಸುಬ್ಬ-ಸುಬ್ಬಿ' ಚಿತ್ರಗಳಲ್ಲಿ ನಟಿಸುತ್ತಿರುವ ರಂಜನಿಗೆ ಮುಂದೆ ಸಿನಿಮಾ ರಂಗದಲ್ಲೇ ಮುಂದುರಿಯುವ ಆಸೆಯಿದೆ.ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಾಗುತ್ತಿರುವ ಬೆಳವಣಿಗೆಗಳನ್ನು ನೀವೇನಾದರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ನಿಮಗೆ ಒಂದಂತೂ ಸ್ಪಷ್ಟವಾಗಿರುತ್ತದೆ. ಅದು ಹೊಸಬರಿಗೆ ಸಿಗುತ್ತಿರುವ ಅವಕಾಶ. ಸಾಕಷ್ಟು ಮಂದಿ ಹೊಸಬರು ಚಿತ್ರರಂಗಕ್ಕೆ ಬರುತ್ತಲೇ ಇದ್ದಾರೆ. ಅದರಲ್ಲೂ ಕಿರುತೆರೆಯಿಂದ ಹಿರಿತೆರೆಗೆ ಬರುವ ನಟಿಮಣಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಧಾರಾವಾಹಿಗಳಲ್ಲಿ ಮಿಂಚಿ, ಮನೆಮಂದಿಯ ಮನಗೆದ್ದ ಬೆಡಗಿಯರಿಗೆ ಸಿನಿಮಾದಲ್ಲೂ ಈಗ ಅವಕಾಶ ಸಿಗುತ್ತಿದೆ. ಈಗಾಗಲೇ ಸಾಕಷ್ಟು ಮಂದಿ ಕಿರುತೆರೆಯಿಂದ ಬಂದು ಸಿನಿಮಾದಲ್ಲಿ ಬಿಝಿಯಾಗಿದ್ದಾರೆ.ಈಗ ಆ ಸಾಲಿಗೆ ಹೊಸ ಸೇರ್ಪಡೆ ರಂಜನಿ ರಾಘವನ್‌. ರಂಜನಿ ರಾಘವನ್‌ ಎಂದರೆ ನಿಮಗೆ ಒಮ್ಮೆಲೇ ಗೊತ್ತಾಗಲಿಕ್ಕಿಲ್ಲ. ಬದಲಾಗಿ "ಪುಟ್ಟಗೌರಿ ಮದುವೆ'ಯ ಗೌರಿ ಎಂದರೆ ನಿಮಗೆ ಬೇಗನೇ ಗೊತ್ತಾಗುತ್ತದೆ. "ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಗೌರಿಯಾಗಿ ಮನೆಮಂದಿಯ ಮನಗೆದ್ದಿರುವ ರಂಜನಿ ರಾಘವನ್‌ ಈಗ ಹಿರಿತೆರೆಗೂ ಕಾಲಿಟ್ಟಿದ್ದಾರೆ. ಬರೀ ಕಾಲಿಟ್ಟಿದ್ದಷ್ಟೇ ಅಲ್ಲ, ಗಟ್ಟಿಯಾಗಿ ನೆಲೆ ನಿಲ್ಲುವ ಸೂಚನೆ ಕೂಡಾ ಇದೆ. ಈಗಾಗಲೇ "ರಾಜಹಂಸ' ಹಾಗೂ "ಸುಬ್ಬ-ಸುಬ್ಬಿ' ಎಂಬ ಎರಡು ಸಿನಿಮಾಗಳಲ್ಲಿ ನಾಯಕಿಯಾಗಿರುವ ರಂಜನಿ ರಾಘವನ್‌ಗೆ ಸಿನಿಮಾಗಳಿಂದ ಸಾಕಷ್ಟು ಅವಕಾಶಗಳು ಬರುತ್ತಿರೋದಂತೂ ಸುಳ್ಳಲ್ಲ. ರಂಜನಿ ಕೂಡಾ ಬಂದ ಅವಕಾಶಗಳಲ್ಲಿ ಬೆಸ್ಟ್‌ ಎನಿಸಿದ್ದನ್ನು ಆರಿಸಿಕೊಂಡು ತಮ್ಮ ಕೆರಿಯರ್‌ ಕಟ್ಟಿಕೊಳ್ಳುತ್ತಿದ್ದಾರೆ.

ದಾರಿತೋರಿಸಿದ ಆಡಿಷನ್‌
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಂಜನಿ ರಾಘವನ್‌ ಯಾವುದೋ ಒಂದು ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಪಡೆಯುವ ಕೆಲಸದಲ್ಲಿರಬೇಕು. ಏಕೆಂದರೆ ರಂಜನಿ ಎಂಬಿಎ ಪದವೀಧರೆ. ಓದುತ್ತಿರುವಾಗಲೇ ಕಲ್ಚರಲ್‌ ಆಗಿ ಹೆಚ್ಚು ಬಿಝಿಯಾಗಿದ್ದ ರಂಜನಿ ಈಗ ನಟಿಯಾಗಿದ್ದಾರೆ. ರಂಜನಿಗೆ ತಾನು ನಟಿಯಾಗುತ್ತೇನೆಂಬ ಯಾವ ನಂಬಿಕೆಯೂ ಇರಲಿಲ್ಲವಂತೆ. ಆದರೆ ಆಸಕ್ತಿಯಂತೂ ಇತ್ತು. ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಮುಂಚೂಣಿಯಲ್ಲಿದ್ದ ರಂಜನಿಗೆ ಅದೇ ಪ್ಲಸ್‌ ಆಯಿತೆಂದರೆ ತಪ್ಪಲ್ಲ. ರಂಜನಿ ಬಣ್ಣದ ಲೋಕಕ್ಕೆದ ಬರುವಲ್ಲಿ "ಕೆಳದಿ ಚೆನ್ನಮ್ಮ' ಧಾರಾವಾಹಿಯ ಆಡಿಷನ್‌ ಪ್ರಮುಖ ಕಾರಣ ಎಂದರೆ ತಪ್ಪಲ್ಲ. ಶೇಷಾದ್ರಿಪುರಂ ಕಾಲೇಜಿನಲ್ಲಿ ರಂಜನಿ ಓದುತ್ತಿದ್ದ ವೇಳೆ "ಕೆಳದಿ ಚೆನ್ನಮ್ಮ' ಧಾರಾವಾಹಿಯ ಆಡಿಷನ್‌ ನಡೆಯುತ್ತಿತ್ತು. ಆಸಕ್ತಿ ಇರುವ ಯಾರು ಬೇಕಾದರೂ ಭಾಗವಹಿಸುವ ಅವಕಾಶ ಕೂಡಾ ಇತ್ತು. ಈ ಅವಕಾಶವನ್ನು ಬಳಸಿಕೊಂಡ ರಂಜನಿ ಆಡಿಷನ್‌ ಕೊಟ್ಟೇಬಿಟ್ಟರು.  ಕಾರಣಾಂತರಗಳಿಂದ ಆ ಧಾರಾವಾಹಿ ಮುಂದುವರಿಯಲಿಲ್ಲ. ಇದರಿಂದ ರಂಜನಿಗೇನೂ ನಷ್ಟವಾಗಲಿಲ್ಲ. ಆಡಿಷನ್‌ ಮೂಲಕ ಬಣ್ಣದ ಜಗತ್ತಿನ ಸಂಪರ್ಕ ಕೂಡಾ ರಂಜನಿಗೆ ಬೆಳೆಯಿತು. ಹೀಗಿರುವಾಗಲೇ ರಂಜನಿಗೆ ಸಿಕ್ಕಿದ್ದು "ಪುಟ್ಟಗೌರಿ ಮದುವೆ' ಧಾರಾವಾಹಿ. ಮೊದಲು ಈ ಆಫ‌ರ್‌ ಬಂದಾಗ ಭಯವಾಯಿತಂತೆ. ಏಕೆಂದರೆ ರಂಜನಿಗೆ ಆಫ‌ರ್‌ ಬರುವ ಹೊತ್ತಿಗೆ ಆ ಧಾರಾವಾಹಿ ಸಖತ್‌ ಫೇಮಸ್‌ ಆಗಿತ್ತು.ಪುಟ್ಟಗೌರಿಯ ಮುಂದುವರಿದ ಪಾತ್ರವನ್ನು ರಂಜನಿ ಮಾಡಬೇಕಿತ್ತು. ಫೇಮಸ್‌ ಧಾರಾವಾಹಿಯಲ್ಲಿ ಏಕಾಏಕಿ ಹೊಸ ಮುಖವನ್ನು ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯದಿಂದಲೇ ರಂಜನಿ ಒಪ್ಪಿಕೊಂಡರಂತೆ. ಆದರೆ, ಇಡೀ ತಂಡದ ಬೆಂಬಲದೊಂದಿಗೆ ಬೇಗನೇ ಎಲ್ಲರಿಗೂ ಇಷ್ಟವಾದ ರಂಜನಿ ಈಗ ಸಿನಿಮಾದಲ್ಲೂ ಬಿಝಿ. "ನನಗೆ ಪುಟ್ಟಗೌರಿ ಮದುವೆ' ಧಾರಾವಾಹಿ ಒಳ್ಳೆಯ ಹೆಸರು ಕೊಟ್ಟಿತು. ಆ ಪಾತ್ರ ಒಂದೇ ತೆರನಾಗಿ ಸಾಗದೇ ಬೇರೆ ಬೇರೆ ಶೇಡ್‌ನೊಂದಿಗೆ ಸಾಗುವ ಮೂಲಕ ನಟನೆಗೆ ಅಲ್ಲಿ ಹೆಚ್ಚು ಅವಕಾಶವಿದೆ' ಎನ್ನುತ್ತಾರೆ ರಂಜನಿ.ಹಂಸ-ಸುಬ್ಬಿಯ ನಿರೀಕ್ಷೆ
ಧಾರಾವಾಹಿಯಲ್ಲಿ ಬಿಝಿಯಾಗಿರುವಾಗಲೇ ರಂಜನಿಗೆ ಸಿನಿಮಾಗಳಿಂದ ಅನೇಕ ಆಫ‌ರ್‌ಗಳು ಬರುತ್ತವೆ. ಆದರೆ ರಂಜನಿ ಮಾತ್ರ ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಅದಕ್ಕೆ ಕಾರಣ ಸೀರಿಯಲ್‌ ಫೇಮ್‌. "ಪುಟ್ಟಗೌರಿ ಮದುವೆ' ಧಾರಾವಾಹಿಯಿಂದ ಒಳ್ಳೆಯ ಹೆಸರು ಬಂದಿದೆ. ಇನ್ನು ಯಾವುದೋ ಒಂದೆರಡು ದೃಶ್ಯಗಳಲ್ಲಿ ಬಂದು ಹೋಗುವ ಸಿನಿಮಾಗಳನ್ನು ಮಾಡಿ ಹೆಸರು ಕೆಡಿಸಿಕೊಳ್ಳೋದು ಬೇಡ ಎಂಬ ಕಾರಣಕ್ಕೆ ರಂಜನಿ ಯಾವುದೇ ಆಫ‌ರ್‌ ಒಪ್ಪಿಕೊಂಡಿರಲಿಲ್ಲವಂತೆ. ಹೀಗಿರುವಾಗ ಬಂದಿದ್ದು "ರಾಜಹಂಸ'. ಮೊದಲು ಕಥೆ ಕೇಳಲು ಹಿಂದೇಟು ಹಾಕಿದ ರಂಜನಿ ಕೊನೆಗೆ ದೊಡ್ಡ ಮನಸು ಮಾಡಿ ಸ್ಟೋರಿ ಕೇಳಿದರಂತೆ. ಕಥೆ ಕೇಳುತ್ತಿದ್ದಂತೆ ಇದು ತನ್ನ ಲಾಂಚ್‌ಗೆ ಹೇಳಿಮಾಡಿಸಿದ ಸಿನಿಮಾ ಎಂದು ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಇಲ್ಲಿ ಹಂಸ ಪಾತ್ರದಲ್ಲಿ ರಂಜನಿ ಕಾಣಿಸಿಕೊಂಡಿದ್ದು, ಹಳ್ಳಿ ಹಿನ್ನೆಲೆಯಿಂದ ಸಿಟಿಗೆ ಬರುವ ಹುಡುಗಿಯ ಪಾತ್ರವಂತೆ. ಇಡೀ ಸಿನಿಮಾ ಇವರ ಸುತ್ತವೇ ನಡೆಯೋದರಿಂದ ಈ ಪಾತ್ರದ ಮೂಲಕ ಗುರುತಿಸಿಕೊಳ್ಳುತ್ತೇನೆಂಬ ವಿಶ್ವಾಸವೂ ರಂಜನಿಗಿದೆ. ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ರಂಜನಿಗೆ ಸಿಕ್ಕ ಮತ್ತೂಂದು ಅವಕಾಶವೆಂದರೆ ಅದು "ಸುಬ್ಬ-ಸುಬ್ಬಿ'. ಅನೂಪ್‌ ಸಾ.ರಾ.ಗೋವಿಂದು ಹೀರೋ ಆಗಿರುವ ಈ ಸಿನಿಮಾದಲ್ಲಿ ಹೋಮ್ಲಿ ಪಾತ್ರ ಸಿಕ್ಕಿದೆಯಂತೆ. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾ ಪಕ್ಕಾ ಯೂತ್‌ಫ‌ುಲ್‌ ಸಿನಿಮಾವಾಗಿರುವುದರಿಂದ ತಾನು ಹೆಚ್ಚು ರೀಚ್‌ ಆಗಬಹುದೆಂಬ ವಿಶ್ವಾಸ ರಂಜನಿಗಿದೆ. "ಮೊದಲು ಸಿನಿಮಾ ಮಾಡೋದು ಬೇಡ್ವಾ ಎಂಬ ಗೊಂದಲದಲ್ಲಿದ್ದೆ. ಏಕೆಂದರೆ ನಾನು ಧಾರಾವಾಹಿಯಲ್ಲಿ ಚೆನ್ನಾಗಿದ್ದೇನೆ. ಜನ ಕೂಡಾ ಗುರುತಿಸುತ್ತಿದ್ದಾರೆ. ಸಿನಿಮಾ ಆಸೆಯಿಂದ ಬಂದ ಅವಕಾಶಗಳನ್ನು ಒಪ್ಪಿಕೊಂಡು ಕೊನೆಗೂ ವ್ಯಥೆ ಪಡುವ ಬದಲು ಹೀಗೇ ಇರೋದೇ ವಾಸಿ ಎಂದುಕೊಂಡಿದ್ದೆ. ಆದರೆ ಈಗ ಒಪ್ಪಿಕೊಂಡಿರುವ ಎರಡೂ ಸಿನಿಮಾಗಳು ಚೆನ್ನಾಗಿವೆ. ನನಗೆ ಒಂದು ಆಸೆ ಇತ್ತು, ಇರೋ ಇಮೇಜ್‌ ಅನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಅದಕ್ಕಿಂತ ಚೆನ್ನಾಗಿ ಆಗಬೇಕೆಂದು. ಅದು ಈ ಸಿನಿಮಾಗಳ ಮೂಲಕ ಈಡೇರಿದೆ' ಎನ್ನುವುದು ರಂಜನಿ ಮಾತು.ರಂಗಭೂಮಿಯ ನಂಟು
ಧಾರಾವಾಹಿಗೆ ಬರುವ ಮುನ್ನ ರಂಜನಿ ಒಂದು ವರ್ಷಗಳ ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. "ರೂಪಾಂತರ' ತಂಡದೊಂದಿಗೆ ಸಾಕಷ್ಟು ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಅದಕ್ಕೆ ಕಾರಣ ನಟನೆಯ ಆಸಕ್ತಿ. "ಕೆಲವೊಮ್ಮೆ ನಟನೆ ಎಂದರೆ ಆ ಕಡೆ ಈ ಕಡೆ ತಿರುಗಿ ಕ್ಯಾಮರಾಗೆ ಎಕ್ಸ್‌ಪ್ರೆಶನ್‌ ಕೊಡೋದೇ ಅಂದುಕೊಂಡಿರುತ್ತೇವೆ. ಆದರೆ ನಿಜವಾದ ನಟನೆ ತಿಳಿಯೋದು ರಂಗಭೂಮಿಯಲ್ಲಿ. ಆ ಕಾರಣದಿಂದ ನಾನು ಒಂದು ವರ್ಷ "ರೂಪಾಂತರ' ತಂಡದೊಂದಿಗಿದ್ದೆ. ಅದು ನನಗೆ ತುಂಬಾ ಸಹಾಯವಾಯಿತು' ಎನ್ನುತ್ತಾರೆ ರಂಜನಿ. ಸದ್ಯ ಧಾರಾವಾಹಿ ಜೊತೆ ಸಿನಿಮಾಗಳಲ್ಲೂ ಬಿಝಿಯಾಗುತ್ತಿರುವ ರಂಜನಿ ಈ ಧಾರಾವಾಹಿ ನಂತರ ಕಿರುತೆರೆಗೆ ಗುಡ್‌ ಬೈ ಹೇಳುವ ಸಾಧ್ಯತೆಯೂ ಇದೆ. ಎರಡೂ ಕಡೆ ಹೊಂದಿಸಿಕೊಂಡು ಹೋಗೋದು ಕಷ್ಟ ಎಂಬ ಕಾರಣಕ್ಕೆ ಈ ನಿರ್ಧಾರ.


"ನಮ್ಮದು ಸಂಪ್ರದಾಯಸ್ಥ ಕುಟುಂಬ. ಸಿನಿಮಾ ಎಂದರೆ ಒಪ್ಪೋದು ಕಷ್ಟವಿತ್ತು. ಆದರೆ. ಇಲ್ಲಿನ ಪಾತ್ರ ತುಂಬಾ ಚೆನ್ನಾಗಿದೆ. ನಟನೆಗೆ ಅವಕಾಶವಿದೆ. ಹಾಗಾಗಿ ಒಪ್ಪಿಕೊಂಡೆ. "ಪುಟ್ಟಗೌರಿ ಮದುವೆ' ಧಾರಾವಾಹಿ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆಯಂತೆ. ಹೋದಲ್ಲೆಲ್ಲಾ ಜನ ಗುರುತು ಹಿಡಿದು ಮಾತನಾಡಿಸುತ್ತಾರೆ. ಮುಂದಿನ ದಿನಗಳಲ್ಲಿ ಸಿನಿಮಾ ರಂಗದಲ್ಲೂ ಒಳ್ಳೆಯ ಅವಕಾಶಗಳು ಸಿಗುತ್ತವೆ ಎಂಬ ವಿಶ್ವಾಸವಿದೆ' ಎನ್ನುತ್ತಾರೆ ರಂಜನಿ. ಅಂದಹಾಗೆ, ರಂಜನಿಗೆ ಸ್ಟಾರ್‌ ಆಗುವ ಬದಲು ಒಳ್ಳೆಯ ಕಲಾವಿದೆಯಾಗಬೇಕೆಂಬ ಆಸೆಯಿದೆಯಂತೆ. ಅದರಲ್ಲೂ ಯಾವುದಾದರೂ ಪಾತ್ರಕ್ಕಾಗಿ ಪೂರ್ವತಯಾರಿ ಮಾಡಿಕೊಳ್ಳುವುದೆಂದರೆ ಅವರಿಗೆ ತುಂಬಾ ಇಷ್ಟವಂತೆ. "ನನಗೆ ಸವಾಲಿನ ಪಾತ್ರಗಳು, ಅದರಲ್ಲೂ ದ್ವಿಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ನೇರಾನೇರ ಬಂದು ಕ್ಯಾಮರಾ ಮುಂದೆ ನಿಲ್ಲುವ ಬದಲು ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುವುದೆಂದರೆ ನನಗೆ ತುಂಬಾ ಇಷ್ಟ' ಎನ್ನುವ ರಂಜನಿಗೆ ಇಲ್ಲಿವರೆಗೆ ಅವರ ಕೆರಿಯರ್‌ ಖುಷಿಕೊಟ್ಟಿದೆಯಂತೆ.
ಯಾರಿವಳು ಈ ಹುಡುಗಿ -ಪುಟ್ಟಗೌರಿಯ ದೊಡ್ಡ ಹೆಜ್ಜೆ ಯಾರಿವಳು ಈ  ಹುಡುಗಿ -ಪುಟ್ಟಗೌರಿಯ ದೊಡ್ಡ ಹೆಜ್ಜೆ Reviewed by VIVEKARAMA on ಅಕ್ಟೋಬರ್ 31, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.