ಸುದೀಪ್‌ ಭೇಟಿ ಮಾಡಿದ ಹಾಲಿವುಡ್‌ ಡೈರೆಕ್ಟರ್‌

ಸುದೀಪ್‌ ಹಾಲಿವುಡ್‌ ಸಿನಿಮಾದಲ್ಲಿ ನಟಿಸಲಿರುವ ಸುದ್ದಿಯನ್ನು ಮೊದಲು ಈ ಹಿಂದೆಯೇ ಲವಲವಿಕೆ ಪ್ರಕಟಿಸಿತ್ತು. ಈಗ ಇದು ಕಾರ್ಯರೂಪಕ್ಕೆ ಬಂದಿದೆ. ಆಸ್ಪ್ರೇಲಿಯಾದಿಂದ ಬೆಂಗಳೂರಿಗೆ ಬಂದಿರುವ ಹಾಲಿವುಡ್‌ ನಿರ್ದೇಶಕ
ಎಡಿ ಆರ್ಯ ಸುದೀಪ್‌ರನ್ನು ಭೇಟಿ ಮಾಡಿದ್ದು, ಫೋಟೋ ಶೂಟ್‌ ಕೂಡಾ ಮಾಡಿದ್ದಾರೆ.ಸೈನ್ಸ್‌ ಫಿಕ್ಷನ್‌ ಕತೆ ಇರುವ ಹಾಲಿವುಡ್‌ ಸಿನಿಮಾ 'ರೈಸನ್‌' ನಲ್ಲಿ ಸುದೀಪ್‌ ನಾಯಕನಾಗಿ ನಟಿಸಲಿದ್ದು, ನಿರ್ದೇಶಕ ಎಡಿ ಮತ್ತು ಕಾರ್ಯಕಾರಿ ನಿರ್ಮಾಪಕ ನಾಗೇಂದ್ರ ಜಯರಾಂ ಭಾರತಕ್ಕೆ ಬಂದು ಸುದೀಪ್‌ ಜತೆ ಮೂರು ದಿನಗಳ ಕಾಲ ಮಾತುಕತೆ ಮಾಡಿದ್ದಾರೆ. ಚಿತ್ರಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಸುದೀಪ್‌ ಜತೆ ಚರ್ಚೆ ಮಾಡಲಾಗಿದೆ. ಸ್ಕ್ರಿಪ್ಟ್‌, ಶೂಟಿಂಗ್‌ ದಿನಾಂಕ, ಕಾಸ್ಟ್ಯೂಮ್‌ ಮತ್ತಿತರ ವಿವರಗಳನ್ನು ತಿಳಿದುಕೊಂಡ ಸುದೀಪ್‌ ಫೋಟೋ ಶೂಟ್‌ನಲ್ಲಿ ಭಾಗಿಯಾಗಿದ್ದಾರೆ. ಸುದೀಪ್‌ ಈ ಚಿತ್ರದ ಮೂಲಕ ಹಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದು, ಅವರ ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

ಚಿತ್ರದಲ್ಲಿ ಅಮೆರಿಕ ಆರ್ಮಿ ಆಫೀಸರ್‌ ಆಗಿ ಸುದೀಪ್‌ ನಟಿಸಲಿದ್ದು, ಅದಕ್ಕೆ ತಕ್ಕ ಕಾಸ್ಟ್ಯೂಮ್‌ಗಳಲ್ಲಿ ಎಕ್ಸ್‌ಕ್ಲೂಸಿವ್‌ ಫೋಟೋ ಶೂಟ್‌ ಮಾಡಲಾಗಿದೆ. ಸದ್ಯದಲ್ಲೇ ಫಸ್ಟ್‌ ಲುಕ್‌ ರಿವೀಲ್‌ ಮಾಡಲಿದ್ದಾರೆ. ಸುದೀಪ್‌ ಅಭಿನಯದ ದೃಶ್ಯಗಳನ್ನು ನ್ಯೂಯಾರ್ಕ್‌ನಲ್ಲಿ ಚಿತ್ರೀಕರಿಸಲಾಗುವುದು. ಡಿಸೆಂಬರ್‌ ಅಥವಾ ಬರುವ ಜನವರಿಯಲ್ಲಿ ಚಿತ್ರೀಕರಣ ನಡೆಯಲಿದೆ. ರಷ್ಯಾ ದೇಶದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಚಿತ್ರದ ಕತೆಯನ್ನು ಎಡಿ ಆರ್ಯ ಬರೆದಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ. ಸಿಡ್ನಿ ಮತ್ತು ನ್ಯೂಯಾರ್ಕ್‌ಗಳಲ್ಲಿ ಶೂಟಿಂಗ್‌ ಮಾಡಿರುವ ಎಡಿ ಆರ್ಯ ಶೇ. 30 ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದಲ್ಲಿ ಹಾಲಿವುಡ್‌ ನಟಿ ಶಾಲ್ಮೋ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಭಾರತೀಯ ಮೂಲದ ನಾಯಕಿ ಪಾತ್ರಕ್ಕಾಗಿ ನಟಿಯ ಆಯ್ಕೆ ಇನ್ನೂ ಆಗಿಲ್ಲ.


ಚಿತ್ರದ ಕತೆ ಮತ್ತು ಸಿದ್ಧತೆ ಬಗ್ಗೆ ನಟ ಸುದೀಪ್‌ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಎಕ್ಸಿಕ್ಯುಟಿವ್‌ ಪ್ರೊಡ್ಯೂಸರ್‌ ನಾಗೇಂದ್ರ ಜಯರಾಂ ಚಿತ್ರದ ವಿವಿಧ ವಿಭಾಗಗಳಲ್ಲಿ ಜವಾಬ್ದಾರಿ ವಹಿಸಿದ್ದು, ನಿರ್ದೇಶಕ ಎಡಿ ಆರ್ಯ ಜತೆ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಎಡಿ ಆರ್ಯ ಬೆಂಗಳೂರಿನ ಹಲವು ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಸಾಧ್ಯವಾದರೆ, ಭಾರತದಲ್ಲೂ ಕೆಲ ದೃಶ್ಯಗಳ ಚಿತ್ರೀಕರಣ ಮಾಡುವ ಆಲೋಚನೆ ಅವರಿಗಿದೆ.

ಸುದೀಪ್‌ ಭೇಟಿ ಮಾಡಿದ ಹಾಲಿವುಡ್‌ ಡೈರೆಕ್ಟರ್‌ ಸುದೀಪ್‌ ಭೇಟಿ ಮಾಡಿದ ಹಾಲಿವುಡ್‌ ಡೈರೆಕ್ಟರ್‌ Reviewed by VIVEKARAMA on ಅಕ್ಟೋಬರ್ 28, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.